ಬ್ರೋಡಿ, ಬೆಂಜನಿನ್ ಕಾಲಿನ್ಸ್
	1783-1862. ಪಾದ್ರಿಯ ಮಗನಾಗಿ ವಿಲ್ಟ್‍ಷೈರಿನಲ್ಲಿ ಹುಟ್ಟಿದ ಇಂಗ್ಲಿಷ್ ಶಸ್ತ್ರ ವೈದ್ಯ. ಹದಿನೆಂಟನೆಯ ವಯಸ್ಸಿನ ತನಕ ತಂದೆಯೇ ಓದಿಸಿದ. ಮುಂದೆ ಜಾನ್ ಅಬರ್ನೆತಿ ಕೈಕೆಳಗೆ ವೈದ್ಯ ವ್ಯಾಸಂಗ ಮಾಡಿ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ವಿವರಾರ್ಡ್ ಹೋಮ್‍ನ ಶಿಷ್ಯನಾದ (1803). ಎರಡು ವರ್ಷಗಳ ಬಳಿಕ ಅಂಗಕ್ರಿಯಾವಿಜ್ಞಾನ ಶಿಕ್ಷಕ, ಆಮೇಲೆ 30 ವರ್ಷಗಳಿಗೂ ಹೆಚ್ಚುಕಾಲ ಸಹಾಯಕ ಶಸ್ತ್ರವೈದ್ಯನಾಗಿದ್ದ. 1810ರಲ್ಲಿ ರಾಯಲ್ ಸೊಸೈಟಿಯ ಫೆಲೊ ಆಗಿ ಚುನಾಯಿತನಾದಾಗ ಈತ ಬರೆದ ಅಂಗಕ್ರಿಯಾವಿಜ್ಞಾನ ಕುರಿತ ಎರಡು ಸಂಶೋಧನ ಪ್ರಬಂಧಗಳು ಅತಿ ಪ್ರೌಢವಾಗಿದ್ದು ಮರು ವರ್ಷವೇ ಈತನಿಗೆ ರಾಯಲ್ ಸೊಸೈಟಿಯ ಕಾಪ್ಲಿ ಪದಕ ದೊರಕಿಸಿಕೊಟ್ಟವು. ಇದು ಗಣ್ಯತೆಯ ಮಾನಕ. 1819-28 ಅವಧಿಯಲ್ಲಿ ಶಸ್ತ್ರವೈದ್ಯರ ರಾಯಲ್ ಕಾಲೇಜಿನಲ್ಲಿ ತುಲನಾತ್ಮಕ ಅಂಗರಚನಾವಿಜ್ಞಾನ ಮತ್ತು ಅಂಗಕ್ರಿಯಾವಿಜ್ಞಾನಗಳ ಪ್ರಾಧ್ಯಾಪಕನಾಗಿದ್ದ. ಮುಂದೆ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಪೂರ್ಣ ಶಸ್ತ್ರವೈದ್ಯನಾದ. 1830ರ ತನಕ ಅಧ್ಯಾಪಕನಾಗಿದ್ದು ವೈದ್ಯ ಕಸಬಿನ ಕರೆಗೆ ಓಗೊಟ್ಟು ಶಿಕ್ಷಣ ಕೈಬಿಡಬೇಕಾಯಿತು. ರೋಗನಿದಾನವನ್ನು ಈತ ಒತ್ತಿ ಹೇಳುತ್ತಿದ್ದ. ಬರಿದೇ ವಿಕಲಗೊಳಿಸುವ ಶಸ್ತ್ರಕ್ರಿಯೆಗಳ ವಿರೋಧಿಯಾಗಿದ್ದ. ನಾಲ್ಕನೆಯ ಜಾರ್ಜ್, ನಾಲ್ಕನೆಯ ವಿಲಿಯಮ್ ಮತ್ತು ವಿಕ್ಟೋರಿಯ ಮಹಾರಾಣಿ ಇವರುಗಳಿಗೆ ಈತ ಅಧಿಕೃತ ವೈದ್ಯನಾಗಿದ್ದ. ಶಸ್ತ್ರವೈದ್ಯರ ರಾಯಲ್ ಕಾಲೇಜಿನ ಪರೀಕ್ಷಕರಲ್ಲಿ ಒಬ್ಬನಾಗಿದ್ದು (1835-46), ಕೊನೆಗೆ ಆ ಕಾಲೇಜಿಗೆ ಅಧ್ಯಕ್ಷನೂ ಆದ (1844). ರಾಯಲ್ ಸೊಸೈಟಿ ಅಧ್ಯಕ್ಷ (1858-61), ಜನರಲ್ ವೈದ್ಯ ಕೌನ್ಸಿಲ್ಲಿನ ಮೊದಲ ಅಧ್ಯಕ್ಷ (1858) ಆಗಿದ್ದ. ಕೀಲು ರೋಗಗಳ ಮೇಲಿನ ರೋಗಾತ್ಮಕ ಮತ್ತು ಶಸ್ತ್ರವೈದ್ಯದ ಶಸ್ತ್ರಕ್ರಿಯೆಗಳು ಎಂಬುದು ಬ್ರೋಡಿಯ ಅತಿ ಮುಖ್ಯ ಮಾರ್ಗೀಯ ಗ್ರಂಥ (1818). ಕೀಲುಗಳಲ್ಲಿ ಭಾಗವಹಿಸುವ ಬೇರೆ ಬೇರೆ ಊತಕಗಳಲ್ಲಿ ರೋಗ ಹೇಗೆ ಆರಂಭವಾಗುವುದು ಎಂಬುದನ್ನು ಇದರಲ್ಲಿ ವಿವರಿಸಿದೆ. ಇದರ ನೇರ ಪ್ರಭಾವವಾಗಿ ಮುಂದಿನ ಶಸ್ತ್ರ ವೈದ್ಯಗಳಲ್ಲಿ ಕಾಲುಗಳನ್ನು ಬರಿದೇ ಕತ್ತರಿಸಿ ಹಾಕುವುದು ಕಡಿಮೆಯಾಗಿ ಇದ್ದುದನ್ನು ಉಳಿಸಿಕೊಳ್ಳುವ ಚಿಕಿತ್ಸೆಯೇ ಹೆಚ್ಚಾಗಿ ಮಾನ್ಯವಾಯಿತು. ಕೊಂಕುಶಿರಬಾವಿನಂಥ (ವೆರಿಕೋಸೀಲ್) ಚರ್ಮದಡಿಯ ಶಸ್ತ್ರಕ್ರಿಯೆಯನ್ನು ಕೈಗೊಳ್ಳುವುದರಲ್ಲಿ (1814) ಇವನೇ ಮೊದಲಿಗ. ಮಾನವನಲ್ಲಿ ಬಿಟ್ಟುಬಿಟ್ಟು ಬರುವ ಕುಂಟುನಡೆಯನ್ನು (ಇಂಟರ್ಮಿಟೆಂಟ್ ಕ್ಲಾಡಿಕೇಷನ್) ವಿವರಿಸಿದವರಲ್ಲಿ ಇವನೇ ಮೊದಲಿಗ. 'ಮನಶ್ಶಾಸ್ತ್ರದಲ್ಲಿಯ ವಿಚಾರಗಳು ಎಂಬ ಕೃತಿಯನ್ನು ಅನಾಮಧೇಯನಾಗಿ (1854) ಪ್ರಕಟಿಸಿ ಮುಂದೆ 1862ರಲ್ಲಿ ಅದರ ಎರಡನೆಯ ಸಂಪುಟವನ್ನು ತನ್ನ ಹೆಸರಿನಲ್ಲೇ ಪ್ರಕಟಿಸಿದ. ಇದರಲ್ಲಿ ಆಡುಮಾತಿನಲ್ಲಿ ಪ್ರಶ್ನೋತ್ತರ ರೂಪದಲ್ಲಿ ಹಲವಾರು ಊಹೆಯ ವಿಚಾರಗಳ ಮೇಲಿನ ತನ್ನ ಅನುಭವದ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾನೆ. ಅಂಡಾಣುನೆರೆತ (ಆವ್ಯುಲೇಷನ್) ಮತ್ತು ಜೀರ್ಣ ಕಾರ್ಯಗಳ ಮೇಲೂ ಸಂಶೋಧನೆ ನಡೆಸಿದ್ದಾನೆ.  (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ